ಕೋಗಿಲೆ

	ಯೂಡಿನಾಮಿಸ್ ಸ್ಕೋಲಪೇಸಿಯ ಎಂಬ ವೈಜ್ಞಾನಿಕ ಹೆಸರಿನ ಹಕ್ಕಿ. (ವರ್ಗ: ಏವಿಸ್, ಗಣ: ಕಕೂಲಫಾಮೀಸ್ó, ಕುಟುಂಬ: ಕಕೂಲಡೀ) ಭಾರತ, ಶ್ರೀಲಂಕಾ, ಬರ್ಮ ಮುಂತಾದ ಉಷ್ಣವಲಯಗಳ ಮೂಲವಾಸಿ ಇದು. ಊರುಗಳ ಬಳಿಯಿರುವ ತೋಟಗಳು, ನಂದನವನಗಳು, ಮಾವಿನ ತೋಪುಗಳು ಮತ್ತಿತರ ಹಣ್ಣಿನ ಮರಗಳ ಮೇಲೆ ಸಾಧಾರಣವಾಗಿ ಕಂಡು ಬರುತ್ತದೆ. ಮರದ ಎಲೆಗಳಲ್ಲಿ ರೆಂಬೆಗಳಲ್ಲಿ ಅವಿತುಕೊಂಡೇ ಇರುವ ಇದನ್ನು ಕೂಗುವಾಗಲೊ ಇಲ್ಲವೆ ಒಂದು ಮರದಿಂದ ಮತ್ತೊಂದು ಮರಕ್ಕೆ ಹಾರುವಾಗಲೊ ಸುಲಭವಾಗಿ ಗುರುತಿಸಬಹುದು. ಕೋಗಿಲೆ ಗಾತ್ರದಲ್ಲಿ ಕಾಗೆಯಷ್ಟಿದೆ. ಬಾಲ ಸ್ವಲ್ಪ ಉದ್ದ. ಗಂಡು ಹಕ್ಕಿಯ ಬಣ್ಣ ಮಿರಮಿರನೆ ಮಿಂಚುವ ಕಪ್ಪು. ಕೊಕ್ಕು ಹಳದಿ ಮಿಶ್ರಿಣ ಹಸಿರು. ಕಣ್ಣು ಕೆಂಪು. ಹೆಣ್ಣು ಹಕ್ಕಿಯ ಬಣ್ಣ ಕಂದು. ಅದರ ರೆಕ್ಕೆಗಳ ಮೇಲೆ ಬಿಳಿ ಚುಕ್ಕೆಗಳು ಮತ್ತು ಸಣ್ಣ ಸಣ್ಣ ಪಟ್ಟೆಗಳು ಇವೆ. ಉದರ ಭಾಗ ಸ್ವಲ್ಪ ಬಿಳುಪು ಮತ್ತು ಸಣ್ಣ ಸಣ್ಣ ಪಟ್ಟೆಗಳಿಂದ ಕೂಡಿದೆ. ಆಲ, ಅರಳಿ, ಎಲಚಿ, ಹಿಪ್ಪುನೇರಳೆ, ಗಂಧದಮರ-ಇವುಗಳಲ್ಲಿನ ಹಣ್ಣುಗಳೇ ಇದರ ಪ್ರಧಾನ ಆಹಾರ. ಕೆಲವು ವೇಳೆ ಕೀಟಗಳು, ಕಂಬಳಿಹುಳುಗಳು, ಸಣ್ಣಪಕ್ಷಿಗಳ ಮೊಟ್ಟೆಗಳು, ಕೆಲವು ಬಗೆಯ ಹೂಗಳ ಮಕರಂದ ಇವನ್ನೂ ಸೇವಿಸುವುದುಂಟು. ಕೋಗಿಲೆ ವಿಶಿಷ್ಟವಾದ ಹಾಗೂ ಇಂಪಾದ ಕುವೂ ಕುವೂ ಎಂಬ ಕೂಗಿನಿಂದಾಗಿ ಹೆಸರಾಗಿದೆ. ಸಾಮಾನ್ಯವಾಗಿ ಗಂಡು ಕೋಗಿಲೆಯೇ ಕೂಗುವುದು. ಇಂಪಾದ ಹಾಡು ಪ್ರಜನನ ಕಾಲದಲ್ಲಿ ಮಾತ್ರ. ಹೆಣ್ಣು ಮರದಿಂದ ಮರಕ್ಕೆ ಹಾರುವಾಗ ಕಿಕ್-ಕಿಕ್-ಕಿಕ್ ಎಂದು ಸದ್ದು ಮಾಡುತ್ತದೆ.

	ಕೋಗಿಲೆ ಮೊಟ್ಟೆಯಿಡುವ ಕಾಲ ಮಾರ್ಚ್‍ನಿಂದ ಆಗಸ್ಟ್ ವರೆಗೆ. ಊರು ಕಾಗೆ ಮತ್ತು ಕಾಡು ಕಾಗೆಗಳ ಗೂಡುಗಳಲ್ಲಿ ಮೊಟ್ಟೆಗಳನ್ನಿಡುವುದು ಇದರ ವೈಶಿಷ್ಟ್ಯ. ಆದ್ದರಿಂದಲೇ ಕವಿಗಳು ಇದನ್ನು ಪರಪುಟ್ಟನೆಂದು ಕರೆದಿದ್ದಾರೆ. ಮೊಟ್ಟೆಗಳು ಕಾಗೆಗಳ ಮೊಟ್ಟೆಗಳಂತೆಯೇ ಇವೆ. ಆದರೆ ಗಾತ್ರದಲ್ಲಿ ಸ್ವಲ್ಪ ಚಿಕ್ಕವು. ಬಣ್ಣ ಹಸಿರು ಮಿಶ್ರಿತ ಬೂದು. ಅಲ್ಲಲ್ಲಿ ಕಂದು ಚುಕ್ಕೆಗಳಿವೆ. ತನ್ನ ಮೊಟ್ಟೆಗಳಿಗೂ ಕೋಗಿಲೆಯ ಮೊಟ್ಟೆಗಳಿಗೂ ಇರುವ ವ್ಯತ್ಯಾಸವನ್ನು ಕಂಡುಹಿಡಿಯಲಾಗದ ಕಾಗೆ ಅವಕ್ಕೆ ಕಾವು ಕೊಟ್ಟು ಮರಿಮಾಡುವುದೇ ಅಲ್ಲದೇ ಮರಿಗಳಿಗೂ ಗುಟುಕು ಕೊಟ್ಟು ಸಲಹುತ್ತದೆ. ಇತರೆ ಕೆಲವು ಹಕ್ಕಿಗಳಲ್ಲೂ ಮೊದಲು ಮರಿಯಾದ ಹಕ್ಕಿ ತನ್ನ ನಂತರ ಮರಿಯಾದವನ್ನು ಕುಕ್ಕಿ ಸಾಯಿಸುವುದೊ ಇಲ್ಲವೆ ಗೂಡಿನಿಂದ ಹೊರಕ್ಕೆ ನೂಕುವುದನ್ನೊ ಮಾಡುತ್ತವೆ. ಇದು ಜೀವವಿಕಾಸದ `ಬಲಶಾಲಿಗಳಷ್ಟೆ ಉಳಿಯುತ್ತದೆ ಎಂದನ್ನನು ತರಿಸಿದೆ. ಕೋಗಿಲೆ ಮರಿಯ ಇನ್ನೊಂದು ಗಮನಾರ್ಹ ಅಂಶವೆಂದರೆ ಮೊಟ್ಟೆಯೊಡೆದು ಹೊರಬರುವ ಮೊದಲನೆಯ ಮರಿ ಗೂಡಿನಲ್ಲಿರುವ ಇತರ ಮೊಟ್ಟೆಗಳನ್ನು ಇಲ್ಲವೇ ಬೇರೆ ಮರಿಗಳನ್ನು ಹೊರಕ್ಕೆ ನೂಕಿ ತನ್ನ ರಕ್ಷಣೆಯ ಕಡೆಗೆ ಗಮನ ಕೊಡುವುದು. ಇತ್ತೀಚಿನ ಸಂಶೋಧನೆಗಳ ಪ್ರಕಾರ ಕಾಗೆ ತಾನು ಸಾಕುತ್ತಿರುವುದು ಕೋಗಿಲೆ ಮರಿ ಎಂಬುದನ್ನು ತಿಳಿದ ಮೇಲೂ ಅದಕ್ಕೆ ಗುಟುಕು ಕೊಟ್ಟು ಸಾಕುತ್ತದೆ. ಕೆಲವು ವೇಳೆ ಒಂದೇ ಗೂಡಿನಲ್ಲಿ ಒಂದಕ್ಕಿಂತ ಹೆಚ್ಚು ಕೋಗಿಲೆ ಮರಿಗಳು ಇದ್ದರೆ ಎಲ್ಲಕ್ಕಿಂತ ಬಲಿಷ್ಠವಾದ ಮರಿ ಮಾತ್ರ ಉಳಿದುಕೊಳ್ಳುತ್ತದೆ. ಹೀಗೆ ಕೋಗಿಲೆ ತನ್ನ ಪ್ರಾರಂಭದಲ್ಲೇ ಬಾಳುವುದಕ್ಕೆ ಹೋರಾಟ ನಡೆಸುತ್ತದೆ. 
												(ಎನ್.ಎಂ.)
										(ಪರಿಷ್ಕರಣೆ : ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ